ಈಜು-
ನೀರಿನ ಮೇಲೆ ಅಥವಾ ಒಳಗೆ ಸ್ವಶಕ್ತಿಯಿಂದ ತೇಲುವಿಕೆ, ಮುಳುಗಿರುವಿಕೆ ಮತ್ತು ಚಲನೆ-ಇವಿಷ್ಟೂ ಕ್ರಿಯೆಗಳ ಒಟ್ಟು ಹೆಸರು (ಸ್ವಿಮ್ಮಿಂಗ್). ಹಡಗು ಮುಂತಾದ ಅಜೀವಿಗಳು ಮತ್ತು ತಿಮಿಂಗಿಲ ಮುಂತಾದ ಜೀವಿಗಳು ಈ ವ್ಯಾಖ್ಯೆಯ ಪರಿಧಿಯೊಳಗೆ ಬರುತ್ತವಾದರೂ ಪ್ರಸಕ್ತ ಲೇಖನದಲ್ಲಿ ಈಜುವಿಕೆಯನ್ನು ಒಂದು ತಂತ್ರವೆಂದು ಪರಿಗಣಿಸಿ ಮನುಷ್ಯನನ್ನು ಕುರಿತಂತೆ ಅದರ ಅನ್ವಯವನ್ನು ಪರಿಶೀಲಿಸಲಾಗಿದೆ.

	ಮನುಷ್ಯ ದೇಹ ಮತ್ತು ನೀರು ಇವುಗಳ ಸಾಪೇಕ್ಷಸಾಂದ್ರತೆಗಳ ತುಲನೆಯಿಂದ ದೇಹ ನೀರಿಗಿಂತ ಹಗುರ ಎಂದು ತಿಳಿಯುವುದು. ಆದ್ದರಿಂದ ದೇಹ ಸಹಜವಾಗಿ ನೀರಿನಲ್ಲಿ ತೇಲಬೇಕು. ಆದರೆ ನೀರಿನ ಪ್ರತಿಕೂಲ ಮತ್ತು ಭಿನ್ನ ಪರಿಸರದಲ್ಲಿ ಮನುಷ್ಯ ಭಯದಿಂದ ಒದ್ದಾಡುತ್ತಾನೆ. ಇದರಿಂದ ಉಂಟಾಗುವ ಬಲಗಳ ಪರಿಣಾಮವಾಗಿ, ಚಲಿಸುವುದು ಒತ್ತಟ್ಟಿಗಿರಲಿ, ತೇಲುವುದೂ ಅವನಿಗೆ ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಮರ, ಇದು ಸಹಜವಾಗಿ ನೀರಿನಲ್ಲಿ ತೇಲುವ ಒಂದು ವಸ್ತು. ಇದನ್ನೇ ರಭಸದಿಂದ ನೀರಿಗೆ ಎಸೆದರೆ ಆ ಅಧಿಕಬಲದ ಪರಿಣಾಮವಾಗಿ ಅದು ಮೊದಲು ಮುಳುಗಿ ತರುವಾಯ ಮೇಲೆ ಬರುತ್ತದೆ. ನೀರಿನಲ್ಲಿ ಒದ್ದಾಡದಿರಲು (ಎಂದರೆ ಮುಳುಗಲು ಸಹಾಯಕವಾಗುವಂಥ ಬಲಗಳನ್ನು ಸೃಷ್ಟಿಸದಿರಲು) ಮತ್ತು ದೇಹದ ಅವಯವಗಳ ಚಲನೆಯಿಂದ ಅನುಕೂಲ ಬಲಗಳನ್ನು ಸೃಷ್ಟಿಸಿಕೊಂಡು ಈಜಲು ಮನುಷ್ಯನಿಗೆ ಶಿಕ್ಷಣ ಅವಶ್ಯಕ. ಪ್ರಾಣಿಗಳ ಪರಿಸ್ಥಿತಿ ಇಲ್ಲಿ ಭಿನ್ನವಾಗಿದೆ. ಹುಟ್ಟಿನಿಂದ ಅವುಗಳಿಗೆ ಈಜು ದತ್ತ. ನೆಲದ ಮೇಲೆ ನಡೆವಂತೆಯೇ ನೀರಿಗಿಳಿದು ಈಜಿ ದಡ ಸೇರುತ್ತವೆ. ಎಂದರೆ ಈಜುವಾಗ ಅವುಗಳ ದೇಹವಿನ್ಯಾಸ ಬದಲಾಗುವುದಿಲ್ಲ. ಮನುಷ್ಯ ಹೀಗೆ ಮಾಡಲಾರ. ನಡೆವಾಗ ಅವನ ದೇಹ ನೆಲಕ್ಕೆ ಲಂಬವಾಗಿದೆ. ಈಜುವಾಗ ಇದು ನೀರಿನ ಮೇಲ್ಮೈಗೆ ಸರಿಸುಮಾರು ಸಮಾನಂತರವಾಗಿಯೇ ಇರುವುದು. 

	ಚರಿತ್ರೆ : ಈಜು ಎಷ್ಟು ಹಳೆಯದೆಂದು ತಿಳಿಯದು. ಇದರ ವಿಚಾರದಲ್ಲಿ ಪುರಾಣೇತಿಹಾಸಗಳು ಸಾಕಷ್ಟು ದಾಖಲೆ ಒದಗಿಸುತ್ತವೆ. ಆದ್ದರಿಂದ ಇದು ಮನುಷ್ಯನಷ್ಟೇ ಪ್ರಾಚೀನವಾದದ್ದು ಎಂದು ಭಾವಿಸಬಹುದು. ಲಂಡನ್ನಿನಲ್ಲಿರುವ ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲಿ ಈಜುವಿಕೆಯನ್ನು ಕುರಿತ ಅತ್ಯಂತ ಪ್ರಾಚೀನ ದಾಖಲೆ ಇದೆ. ಅಲ್ಲಿರುವ ಕೆತ್ತನೆ ಚಿತ್ರ ಕ್ರಿ.ಪೂ. 9ನೆಯ ಶತಮಾನದ್ದು. ಶತ್ರುಗಳಿಂದ ತಪ್ಪಿಸಿಕೊಳ್ಳಲು ನೀರಿನ ಮೇಲೆ ಈಜಿಕೊಂಡು ಹೋಗುತ್ತಿರುವ ಮೂವರು ಸೈನಿಕರನ್ನು ಅಲ್ಲಿ ಚಿತ್ರಿಸಿದೆ. ಅವರ ಪೈಕಿ ಇಬ್ಬರು ಗಾಳಿತುಂಬಿದ ಚರ್ಮದ ಬುರುಡೆಗಳನ್ನು ಬದಿಗೆ ಸಿಕ್ಕಿಸಿಕೊಂಡಿದ್ದಾರೆ. ಇವುಗಳ ಸಹಾಯದಿಂದ ಅವರ ತೇಲುವ ಶಕ್ತಿ ಹೆಚ್ಚಾಗುತ್ತದೆ ಎಂದು ಅವರಿಗೆ ತಿಳಿದಿತ್ತು. ಮೂರನೆಯವನು ಕೈಗಳ ಹೊಡೆತದಿಂದ ಮುಂದೆ ಸಾಗುತ್ತಿದ್ದಾನೆ. ಹೀಗೆ ಅಷ್ಟು ಹಿಂದಿನ ದಿವಸಗಳಲ್ಲಿಯೇ ಈಜುವಿಕೆಯ ತಂತ್ರದ ಮತ್ತು ಸಹಾಯಕ ಸಾಮಗ್ರಿಗಳ ಪರಿಚಯ ಮನುಷ್ಯನಿಗೆ ಇತ್ತು ಎಂದು ಗೊತ್ತಾಗುವುದು.

	ಪ್ರಾಚೀನ ಈಜುಕೊಳಗಳನ್ನು ಪಂಜಾಬಿನ ಹರಪ್ಪ ಮತ್ತು ಮೊಹೆಂಜೊದಾರೊಗಳಲ್ಲಿ ನಡೆಸಿದ ಭೂಶೋಧನೆಗಳಿಂದ ಗುರುತಿಸಲಾಗಿದೆ. ರೋಮನರು ಕ್ರಿ.ಶ. ಒಂದನೆಯ ಶತಮಾನದಲ್ಲಿ ಕಟ್ಟಿದ ಒಂದು ಕೊಳದ ಅವಶೇಷ ದೊರೆತಿದೆ. ವಿಜಯನಗರದ ರಾಜಧಾನಿ ಹಂಪೆಯಲ್ಲಿ ಈಜುಕೊಳವಿದ್ದುದಕ್ಕೆ ಸ್ಪಷ್ಟ ಪುರಾವೆ ಇದೆ. ಆದ್ದರಿಂದ ಆ ದಿವಸಗಳಲ್ಲಿ ಈಜು ಒಂದು ತಂತ್ರ ಮಾತ್ರವಾಗಿರಲಿಲ್ಲ. ಜನಪ್ರಿಯ ಕ್ರೀಡೆಯೂ ಆಗಿತ್ತೆಂದು ತಿಳಿಯುತ್ತದೆ. ಸೈನಿಕರಿಗೆ ಈಜುವಿಕೆಯ e್ಞÁನ ಅಂದು ಕಡ್ಡಾಯವಾಗಿತ್ತು. ಸೈನ್ಯಗಳು ಹೊಳೆ ಹಾಯಬೇಕಾದ ಸಂದರ್ಭಗಳಲ್ಲಿ ಇದು ಸಹಕಾರಿಯಾಗುತ್ತಿತ್ತು.

	ಹಿಂದೂ ದೇಶದಲ್ಲಿ ಪ್ರಚಲಿತವಿದ್ದ ಈಜುವಿಕೆಯ ಒಂದು ವಿಶಿಷ್ಟಶೈಲಿಯನ್ನು 185ರ ಸುಮಾರಿಗೆ ಬ್ರಿಟಿಷ್ ಅಧಿಕಾರಿಗಳು ಕಲಿತು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರೂಢಿಸಿದುದಕ್ಕೆ ಆಧಾರವಿದೆ. ಈ ಶೈಲಿಯ ಹೆಸರು ತೋಳುಮೇಲೆತ್ತಿ ಬದಿಗೆ ಬಡಿತ (ಓವರ್ ಆರ್ಮ್ ಸೈಡ್ ಸ್ಟ್ರೋಕ್).

	ತಂತ್ರ: ಈಜಲು ಕಲಿಯುವುದು ಕಷ್ಟವಲ್ಲ. ನಡೆಯಲು ಕಲಿತ ಒಂದು ಮಗು ಕೂಡ ಈಜಬಹುದು. ಒಂದು ವಿಶಿಷ್ಟ ರೀತಿಯಲ್ಲಿ ಕಾಲುಗಳ ಚಲನೆ ಅಗತ್ಯವಷ್ಟೆ. ಅರ್ಧ ಎಚ್ಚರದ ಅವಸ್ಥೆಯಲ್ಲಿ ಸಹ ಈಜಬಹುದು. ಇಲ್ಲಿನ ವೈe್ಞÁನಿಕ ತತ್ತ್ವವಿಷ್ಟು. ನೀರಿನ ಫ್ಲವನತೆ (ಬಾಯೆನ್ಸಿ) ಪ್ರತಿ ವಸ್ತುವನ್ನೂ ಮೇಲಕ್ಕೆ ತಳ್ಳುತ್ತದೆ. ಇದರ ಜೊತೆಗೆ ಹರಿಯುವ ನೀರಿನಲ್ಲಿ ವಾಹಕ ಬಲಗಳೂ ಇರುತ್ತವೆ. ಆವಯವಗಳ ಕ್ರಮಬದ್ಧ ಚಲನೆಯಿಂದ ನೀರಿನ ಸಹಜ ಬಲಗಳಿಗೆ ಒತ್ತಾಸೆ ದೊರೆತು ದೇಹ ತೇಲುವುದು ಮಾತ್ರವಲ್ಲ ವಿವಿಧ ದಿಕ್ಕುಗಳಿಗೆ ಚಲಿಸುವುದೂ ಸಾಧ್ಯವಾಗುತ್ತದೆ.

	ಮನುಷ್ಯನಿಗೆ ಈಜಿನಲ್ಲಿ ಮೊದಲ ಪಾಠ ಪ್ರಾಯಶಃ ಚತುಷ್ಟಾದಿಯಿಂದ ಆಗಿರಬೇಕು. ಕೈಕಾಲುಗಳೆರಡನ್ನು ನೀರಿನಲ್ಲಿ ಇಳಿಬಿಟ್ಟ ಚತುಷ್ಪಾದಿಯ ದೇಹದ ವಿನ್ಯಾಸವನ್ನೇ ಮನುಷ್ಯನೂ ಅನುಕರಿಸಲು ತೊಡಗಿದ್ದು ಈ ಕಾರಣದಿಂದಾಗಿರಬಹುದು. ಅಂದಿನ ಮೊದಲ ಪಾಠದ ಅಸ್ಪಷ್ಟತೆಯಿಂದ ಇಂದಿನ ವೈe್ಞÁನಿಕ ವಿಧಾನಗಳ ನಿರ್ದಿಷ್ಟತೆ ಮತ್ತು ಸ್ಪಷ್ಟತೆಗಳವರೆಗೆ ಈಜುವಿಕೆಯ ತಂತ್ರದಲ್ಲಿ ಆಗಿರುವ ಬದಲಾವಣೆಗಳು ಹಲವಾರು. ಈಜುವಿಕೆಯಲ್ಲಿ ಅತ್ಯಂತ ಸರಳವಾದ ವಿನ್ಯಾಸ ನಾಯಿಯಂತೆ ಹುಟ್ಟು ಹಾಕುವಿಕೆ (ಡಾಗ್ ಪ್ಯಾಡಲ್). ಇದು ಭೂಮಿಯ ಮೇಲೆ ಒಂದು ನಾಯಿ ಸಹಜ ಸ್ಥಿತಿಯಲ್ಲಿ ಇದ್ದಾಗ ಹೇಗೋ ಅಂಥ ನಿಲುವು-ತಲೆಯನ್ನು ಮೇಲೆತ್ತಿ ಕೈಗಳನ್ನು ಹೊಟ್ಟೆಯ ಕಡೆಗೆ ಎಳೆದುಕೊಳ್ಳುತ್ತ ಕಾಲುಗಳನ್ನು ಒಂದಾದ ಮೇಲೊಂದರಂತೆ ಬಡಿಯುವುದು. ಮೊದಮೊದಲು ಇಲ್ಲಿ ಗಲಭೆ, ಶ್ರಮ ಜಾಸ್ತಿ, ಚಲನೆ ಕಡಿಮೆ, ಕೈಕಾಲು ಬಡಿತಗಳ ತೀವ್ರತೆ, ನೀರಿನ ತಳದ ಕ್ಷೋಭೆ ಇವುಗಳಿಂದ ಕಲಿಯುವವ ಬೇಗನೆ ದಣಿದುಹೋಗುತ್ತಾನೆ. ಇಲ್ಲಿ ಮುಳುಗದೇ ಇರಲು ಮಾಡಬೇಕಾದ ಪ್ರಯತ್ನವೇ ಅಧಿಕವಾದ್ದರಿಂದ ಚಲನೆ ವಿಶೇಷವಾಗಿರುವುದಿಲ್ಲ. ಮುಂದೆ ಹೆಚ್ಚು ಹೆಚ್ಚು ಅಭ್ಯಾಸವಾದ ಹಾಗೆ ಪ್ರಯತ್ನ ಸಫಲವಾಗುತ್ತದೆ. ಮುಂಚಲನೆ ಗಮನಾರ್ಹವಾಗಿ ಏರುತ್ತದೆ. ಇದೇ ಕ್ರಮದಲ್ಲಿ ಸುಧಾರಣೆ ಮಾಡಿ ತೋಳು ಬಡಿತದ ನಿಲವು (ಓವರ್ ಆರ್ಮ್ ಸ್ಟ್ರೋಕ್) ಸಾಧ್ಯವಾಯಿತು. ಇಲ್ಲಿ ತೋಳುಗಳನ್ನು ಮೇಲಕ್ಕೆತ್ತಿ ಹಿಂದಿನಿಂದ ಮುಂದಕ್ಕೆ ಬೀಸಿ ನೀರಿನೊಳಗಿಂದ ಹೊಟ್ಟೆಯ ಕಡೆಗೆ ಎಳೆದುಕೊಂಡು ನೀರನ್ನು ಹಿಂದಕ್ಕೆ ತಳ್ಳಿದಾಗ ದೇಹ ಮುಂದಕ್ಕೆ ಚಲಿಸುತ್ತದೆ. ತೋಳಿನ ಹಿಂಚಲನೆ ದೇಹವನ್ನು ಮುಂದಕ್ಕೆ ನೂಕಿದರೆ ಕಾಲುಗಳ ಚಲನೆ ಅದನ್ನು ತೇಲಿಸುವುದೆಂದು ಮೊದಲು ನಂಬಲಾಗಿತ್ತು. ಆದರೆ ಈಗ ಇದರ ಅರ್ಥ ಸ್ಪಷ್ಟವಾಗಿ ತಿಳಿದಿದೆ-ತೋಳುಗಳ ಬಡಿತ ದೇಹವನ್ನು ಸಮತೋಲದಲ್ಲಿ ಇಟ್ಟಿರುವುದು: ಕಾಲುಗಳ ಬಡಿತ ಅದನ್ನು ಮುನ್ನೂಕುವುದು; ತೋಳುಗಳ ಬೀಸುವಿಕೆ ಚಲನೆಯನ್ನು ಪೋಷಿಸುತ್ತದೆ. ದಿಕ್ಕನ್ನು ನಿಯಂತ್ರಿಸುತ್ತದೆ.

	ಈ ನಿಲವುಗಳು ಕ್ರಮೇಣ ಇನ್ನೂ ಸುಧಾರಿಸಿದುವು. ಈಜು ಸುಖಕರವಾಗುವಂತೆ ಮಾರ್ಪಾಟಾಗಿ ತೆವಳುಬಡಿತ (ಕ್ರಾಲ್‍ಸ್ಟ್ರೋಕ್). ಎದೆಬಡಿತ (ಬ್ರೆಸ್ಟ್ ಸ್ಟ್ರೋಕ್), ಹಿಂದು ಬಡಿತ (ಬ್ಯಾಕ್‍ಸ್ಟ್ರೋಕ್), ಚಿಟ್ಟೆ ಬಡಿತಗಳು (ಬಟರ್‍ಫ್ಲೈಸ್ಟ್ರೋಕ್ಸ್) ರೂಪುಗೊಂಡುವು. ಬೇರೆ ಬೇರೆ ಸಂದರ್ಭಗಳಿಗೆ ತಕ್ಕ ಹಾಗೆ ಬೇರೆ ಬೇರೆ ವೇಗದಲ್ಲಿ ಈಜುವುದು ಸಾಧ್ಯವಾಯಿತು. ಇವುಗಳಲ್ಲಿ ಯಾವುದೇ ಒಂದು ಬಗೆಯ ಬಡಿತವನ್ನು ಚೆನ್ನಾಗಿ ಕಲಿತರೆ ಉಳಿದವನ್ನು ಸುಲಭವಾಗಿ ತಿಳಿಯಬಹುದು. ಈ ತರದಲ್ಲಿ ಈಜು ಒಂದು ತಂತ್ರವಾಗಿ ಬೆಳೆಯಿತು. ಅದರ ವೈe್ಞÁನಿಕ ವಿಶ್ಲೇಷಣೆ, ಅಭ್ಯಾಸ ಸಾಧ್ಯವಾಯಿತು. ವೈe್ಞÁನಿಕವಾದ ಈಜಿನಲ್ಲಿ ಅತ್ಯಲ್ಪ ಶ್ರಮ ಅತ್ಯಧಿಕ ವೇಗ ಲಭಿಸುತ್ತವೆ.

	ಬಡಿತದ ವಿಧಾನಗಳಲ್ಲೆಲ್ಲ ತೆವಳು ಬಡಿತವೇ ತುಂಬ ವೇಗವಾಗಿ ಅಭ್ಯಾಸ ಮಾಡಬಹುದಾದಂಥದು. ಇದರಲ್ಲಿ ದೇಹ ನೀರಿನ ಮೇಲೆ ಕವುಚಿ ಮಲಗಿರುತ್ತದೆ. ತಲೆ ಕೆಳಮೊಗವಾಗಿದ್ದು ನೀರಿನಲ್ಲಿ ಮುಳುಗಿರುತ್ತದೆ. ಈಜುಗಾರ 25'-30' ಗಳಿಗೊಂದು ಸಲ ತಲೆಯನ್ನು ಉಸಿರಾಟಕ್ಕಾಗಿ ಮೇಲೆತ್ತುತ್ತಾನೆ. ತೋಳುಗಳನ್ನು ನೀರಿನೊಳಗೆ ನೇರವಾಗಿ ಎಳೆದುಕೊಂಡು ತೊಡೆಯ ಬಳಿ ನೀರಿನಿಂದ ಹೊರಗೆ ಮೇಲೆತ್ತಿ ಮತ್ತೆ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಅವನ್ನು ಮುಂಚಾಚಿ ನೀರಿನೊಳಕ್ಕೆ ಸೆಳೆಯುತ್ತಾನೆ. ಆಮೇಲೆ ಕಾಲುಬಡಿತದ ಅಭ್ಯಾಸ ಇಲ್ಲಿ ಚಲನೆ ಸೊಂಟದಿಂದ ಪ್ರಾರಂಭವಾಗಿ ಮಂಡಿಗಳು ನೇರವಾಗಿದ್ದು ಅಥವಾ ಸ್ವಲ್ಪವೇ ಬಾಗಿದ್ದು ಕಾಲುಗಳ ಚಲನೆ ಕತ್ತರಿಯ ಹಾಗಿರುತ್ತದೆ. ಕಾಲು ಬೆರಳುಗಳು ನೇರವಾಗಿರುತ್ತವೆ; ಅಂಗಾಲುಗಳು ಸ್ವಲ್ಪ ಒಳಬದಿಗೆ ಬಾಗಿದ್ದು, ತಿರುಗು ಚಲನೆಯನ್ನು ಉಂಟುಮಾಡುತ್ತವೆ. ಸದ್ಯದಲ್ಲಿ ಇದೇ ಅತ್ಯಂತ ವೇಗವಾದ ಬಡಿತ. ಈ ವಿಧಾನದಿಂದ ಒಂದು ಗಂಟೆಗೆ ನಾಲ್ಕು ಮೈಲಿ ಒಂದು ಫರ್ಲಾಂಗಿನಷ್ಟು ದೂರ ಚಲಿಸುವುದು ಸಾಧ್ಯ.

	ಕ್ರೀಡೆಗಳು : ಚೆನ್ನಾಗಿ ಈಜು ಕಲಿತ ಮೇಲೆ ತಮಾಷೆಗಾಗಿ ಅಥವಾ ವಿನೋದಕ್ಕಾಗಿ ಚಿತ್ರವಿಚಿತ್ರವಾದ ನಿಲವುಗಳನ್ನು ಅಭ್ಯಾಸ ಮಾಡಬಹುದು-ರೋಲಿಂಗ್ ಲಾಗ್, ಸ್ಪಿನ್ನಿಂಗ್ ಟಾಷ್, ಮೇಲು ಮೇಲಾಗಿ ಗರಗರ ಸುತ್ತುವುದು, ವಿವಿಧ ಕಸರತ್ತುಗಳು ಇತ್ಯಾದಿ. ಇವನ್ನು ಮಾಡುವುದು ನೋಟಕನಿಗೂ ಮಾಡುವವನಿಗೂ ನಿಜವಾದ ಮನರಂಜನೆಯೂ ಹೌದು, ಕ್ರೀಡೆಯೂ ಹೌದು. 

ಉಳಿದೆಲ್ಲ ಕ್ರೀಡೆಗಳಂತೆಯೇ ಈಜುವಿಕೆಯಲ್ಲೂ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಬೇರೆ ಬೇರೆ ಶೈಲಿಗಳಲ್ಲಿ ವೇಗವಾಗಿ ಈಜುವುದು-ದೀರ್ಘವಾದ ಮತ್ತು ಸಮೀಪದ ದೂರಗಳಲ್ಲಿ, ವಾಟರ್ ಪೋಲೋ ಆಟ ಮುಂತಾದ ಸ್ಪರ್ಧೆಗಳು ನಡೆಯುತ್ತವೆ. ವೇಗವಾಗಿ ಮುಳುಗೇಳುವುದು (ಡೈವಿಂಗ್) ಈಜುವಿಕೆಯ ಒಂದು ವಿಶಿಷ್ಟ ಅಂಗ. ಇದು ಒಂದು ಕಲೆಯೂ ಹೌದು. ಎಲ್ಲ ಈಜುಗಾರರೂ ಮುಳುಗೇಳಲಾರರು. ಆದರೆ ಮುಳುಗೇಳಬಲ್ಲವರೆಲ್ಲರೂ ಸುಖವಾಗಿ ಈಜಬಲ್ಲರು. ದೇಹದ ಮೇಲೆ ಸಂಪೂರ್ಣವಾದ ಹತೋಟಿ ಮತ್ತು ಸದಾ ಎಚ್ಚರಿಕೆಯ ಮನಸ್ಸು ಮುಳುಗೇಳುವವರಿಗೆ ಅತ್ಯಗತ್ಯ. ಇದರಲ್ಲಿ ಮುಮ್ಮಖನಾಗಿ ಮುಳುಗೇಳುವುದು, ಹಿಮ್ಮಖನಾಗಿ ಬೀಳುವುದು, ಗಾಳಿಯಲ್ಲಿ ತಿರುವುಗುವುದು, ಚಿತ್ರ ವಿಚಿತ್ರ ಸಾಹಸ ಮುಂತಾದ ಅನೇಕ ಬಗೆಗಳಿವೆ. ಮುಳುಗೇಳುವವ ನೀರಿಗೆ ದುಮ್ಮಿಕ್ಕುವ ಮುನ್ನ ವೇದಿಕೆಯ ಅಂಚಿಗೆ ಬರಬೇಕು. ಇದು ದುಮುಕು ಹಲಗೆ (ಡೈವಿಂಗ್ ಬೋರ್ಡ್). ಹಲಗೆ ಇರಬೇಕಾದ ಎತ್ತರ ಕಿರಿಯರ ಸ್ಪರ್ಧೆಯಲ್ಲಿ ಒಂದು ಮೀಟರ್, ಹೆಂಗಸರ ಸ್ಪರ್ಧೆಯಲ್ಲಿ ಮೂರು ಮೀಟರ್, ಅಂತರರಾಷ್ಟ್ರೀಯ ಮತ್ತು ಪರಿಣತರ ಸ್ಪರ್ಧೆಗಳಲ್ಲಿ ಐದು ಮತ್ತು ಹತ್ತು ಮೀಟರ್ ಎತ್ತರದ ದುಮುಕು ಹಲಗೆ ಇದ್ದಾಗ ಅಲ್ಲಿ ನೀರಿನ ಆಳ 13'-15' ಇರುತ್ತದೆ. ಪ್ರಪಂಚದ ಅತ್ಯಂತ ಶ್ರೇಷ್ಠವಾದ ಈಜುಕೊಳಗಳು 15' ಗಿಂತ ಹೆಚ್ಚು ಆಳವಾಗಿಲ್ಲ.

	ಈಜು ಸ್ಪರ್ಧೆ : ಈಜಿನಲ್ಲಿ ನಮಗೆ ತಿಳಿದಿರುವಂತೆ ಮೊದಲನೆಯ ಸ್ಪರ್ಧೆ ನಡೆದದ್ದು 100 ವರ್ಷಗಳ ಹಿಂದೆ. ಅದೇ ಲಂಡನ್ನಿನ ಥೇಮ್ಸ್ ನದಿಯಲ್ಲಿ 100 ಗಜಗಳ ದೂರದ ಸ್ಪರ್ಧೆ. ವಿನ್ಯಾಸ ನಾಯಿಯ ಕ್ರಮದ್ದು (ಡಾಗ್ ಪ್ಯಾಡಲ್). ಆಗ ದಾಖಲಾದ ಕಾಲ 2 ಮಿನಿಟ್ 16 ಸೆಕೆಂಡುಗಳು. ಇಂದು ಈ ದಾಖಲೆ ಮುರಿದಿದೆ. ಅದೇ ದೂರಕ್ಕೆ 53 ಸೆಕೆಂಡುಗಳಾಗಿದೆ. ಈಗ ಇನ್ನೂ ದೀರ್ಘವಾದ ದೂರದ ಸ್ಪರ್ಧೆಗಳು ಏರ್ಪಾಟಾಗುತ್ತಿವೆ. ಅವುಗಳಲ್ಲೊಂದು, ಕ್ರಮವಾಗಿ ನಡೆಯುವ ಇಂಗ್ಲಿಷ್ ಕಡಲ್ಗಾಲುವೆಯ ಈಜು ಸ್ಪರ್ಧೆ. ಇದು 21 ಭೂಮೈಲಿಗಳ ಉದ್ದವಿದೆ. ಪ್ರಪಂಚದ ಎಲ್ಲ ಭಾಗಗಳ, ಸ್ತ್ರೀಪುರುಷರೂ ಇದರಲ್ಲಿ ಭಾಗವಹಿಸುತ್ತಾರೆ. ಈಜಿನ ಇತಿಹಾಸದಲ್ಲಿ ಇಂಗ್ಲಿಷ್ ಕಡಲ್ಗಾಲುವೆಯನ್ನು ಮೊತ್ತಮೊದಲು ದಾಟಿದವ ಇಪ್ಪತ್ತೆಂಟು ವರ್ಷ ವಯಸ್ಸಿನ ಕ್ಯಾಪ್ಟನ್ ವೆಬ್ಸ್. ಅವನು ಇಂಗ್ಲೆಂಡಿನಿಂದ ಫ್ರಾನ್ಸಿಗೆ ಈ ಕಾಲುವೆಯನ್ನು 21 ಗಂಟೆ 43 ಮಿನಿಟುಗಳಲ್ಲಿ ದಾಟಿದ. (24ನೆಯ ಆಗಸ್ಟ್ 1875, ಸೋಮವಾರ). ಈ ದಾಖಲೆ 48 ವರ್ಷಗಳು ದೀರ್ಘಕಾಲ ಮುರಿಯದೆ ಉಳಿಯಿತು. ಹಾಗಾಗಿ ಕ್ಯಾಪ್ಟನ್ ವೆಬ್ಸ್‍ನ ಹೆಸರು ಸುಪ್ರಸಿದ್ಧವಾಯಿತು. ಆಮೇಲಿನ ವರ್ಷಗಳಲ್ಲಿ ಅನೇಕ ಫ್ರೆಂಚರು, ಜರ್ಮನರು, ಇಂಗ್ಲಿಷರು ಆ ಸಾಹಸಕ್ಕೆ ಪ್ರಯತ್ನಿಸಿದರು. ಅಂಥ ಮೊದಲನೆಯ ತೀವ್ರ ಪ್ರಯತ್ನ ಕೈಹಾಕಿದವಳೆಂದರೆ ಮಹಾಂ ಇಸಾಸೆಸ್ಕಸ್ ಎಂಬ ಒಬ್ಬ ಮಹಿಳೆ (1900)ಕ್ಕೆ. 1905ರಲ್ಲಿ ಮಿಸ್ ಕೆಲೆರಮನ್ ಎಂಬಾಕೆ ಮತ್ತೆ ಪ್ರಯತ್ನಿಸಿದಳು. ಆದರೆ ಎರಡು ಪ್ರಯತ್ನಗಳೂ ನಿಷ್ಫಲವಾದುವು. ಕೊನೆಗೆ 1926ರಲ್ಲಿ ಮಿಸ್ ಜಿ. ಎಡೆರ್ಲೇ ಎಂಬ ಅಮೆರಿಕದ ಹದಿನಾಲ್ಕು ವರ್ಷದ ಬಾಲಿಕೆ ಇಂಗ್ಲಿಷ್ ಕಾಲುವೆಯನ್ನು 14 ಗಂಟೆ 34 ಮಿನಿಟುಗಳಲ್ಲಿ ದಾಟಿದಳು. ಉದ್ದಕ್ಕೂ ತೆವಳು ಬಡಿತದ ವಿನ್ಯಾಸವನ್ನು ಅವಳು ಅನುಸರಿಸಿದ್ದಳು. ಇಂಗ್ಲಿಷ್ ಕಾಲುವೆಯನ್ನು ಈಜಿ ದಾಟಿದ ಮೊದಲನೆಯ ಹೆಂಗಸು ಈ ಹುಡುಗಿಯೇ. ಎರಡನೆಯ ಹೆಂಗಸು ದಕ್ಷಿಣ ಆಫ್ರಿಕದ ಮಿಸ್ ಡಂಕನ್. ಇವಳು ದಾಟಿದುದು 1930ರಲ್ಲಿ. 1951ರಲ್ಲಿ ಇಂಗ್ಲೆಂಡಿನ ಡಬ್ಲ್ಯು.ಇ. ಬಾರ್ನಿ ಎಂಬಾತ ಕಾಲುವೆಯ ಈ ಕಡೆಯಿಂದ ಆ ಕಡೆಗೆ ಮತ್ತು ಆ ಕಡೆಯಿಂದ ಈ ಕಡೆಗೆ ದಾಟಿ ದಾಖಲೆ ಸ್ಥಾಪಿಸಿದ. ಆ ಕಾಲಕ್ಕೆ ಅತ್ಯಂತ ಯಶಸ್ವಿಯಾದ ಈಜುಗಾರನೆಂದು ಅವನನ್ನು ಸನ್ಮಾನಿಸಲಾಯಿತು. ಆಗ ಅವನಿಗೆ ಐವತ್ತೈದು ವರ್ಷ ವಯಸ್ಸು. ಅದೇ ವರ್ಷದಲ್ಲಿ ಅಮೆರಿಕದ ಮಿಸ್ ಫ್ಲಾರೆನ್ಸ್ ಚಾಡ್ವಿಕ್ ಕಾಲುವೆಯ ಎರಡು ಕಡೆಗೆ ಈಜಿದ ಪ್ರಥಮ ಮಹಿಳೆಯಾದಳು. 1950ರಲ್ಲಿ ಈಜಿಪ್ಟಿನ ಅಬ್ದುಲ್ ರಹೀಮ್ ಕಾಲುವೆಯನ್ನು 10 ಗಂಟೆ 50 ಮಿನಿಟುಗಳಲ್ಲಿ ಈಜಿದ. ಇಂದಿಗೂ ಇದೇ ದಾಖಲೆಯಾಗಿ ಉಳಿದಿದೆ. ಅತ್ಯಂತ ದೀರ್ಘವಾದ ದೂರವನ್ನು ಈಜಿದ ದಾಖಲೆ 1940ರಲ್ಲಿ ಜಾನ್ ವಿ. ಸಿಗ್ಮಂಡನದು. ಅವನು ಮಿಸಿಸಿಪಿ ನದಿಯಲ್ಲಿ ನಿರಂತರವಾಗಿ 89 ಗಂಟೆ 48 ಮಿನಿಟು ಈಜಿ ಒಟ್ಟು 292 ಮೈಲಿಗಳನ್ನು ಕ್ರಮಿಸಿದ. ಕೊನೆಯಲ್ಲಿ ಅವನು ಅರೆಪ್ರಜ್ಞೆ ಸ್ಥಿತಿಯಲ್ಲಿದ್ದ. ನದಿಯ ಸೆಳವು ಗಂಟೆಗೆ ಎರಡು ಮೈಲಿಯಷ್ಟಿದ್ದರೂ ಅವನದು ಅತ್ಯಂತ ಉತ್ಕøಷ್ಟವಾದ ಕೆಲಸವಾಗಿತ್ತು. ಇದು ಗೌರವಾರ್ಹವಾದ ಸಾಧನೆಯೇ ಸರಿ.

	ಉಪಯೋಗಗಳು : ಈಜಿನ ಅಗತ್ಯ ಮತ್ತು ಅನುಕೂಲಗಳ ವಿಷಯದಲ್ಲಿ ಭಿನ್ನಾಭಿಪ್ರಾಯಕ್ಕೆ ಎಡೆಯೇ ಇಲ್ಲ. ಪ್ರತಿಯೊಂದು ರಾಷ್ಟ್ರವೂ ಉತ್ತಮ ಆರೋಗ್ಯ ಮತ್ತು ಸಾಮಾನ್ಯ ದೇಹದಾಢ್ರ್ಯಕ್ಕಾಗಿ ಈಜನ್ನು ಪುರಸ್ಕರಿಸುತ್ತದೆ. ಜೀವ ಉಳಿಸಿಕೊಳ್ಳುವುದು ಪ್ರತಿಯೊಬ್ಬನಿಗೂ ಅತ್ಯಂತ ಮುಖ್ಯವಾದ ಅಂಶ. ವರ್ತಮಾನ ಪತ್ರಿಕೆಗಳಲ್ಲಿ ಈಜುಬಾರದೆ ಜನ ಮುಳುಗಿ ಸತ್ತುಹೋದ ವರದಿಗಳನ್ನು ಓದುತ್ತೇವೆ. ಮುಳುಗಿಹೋಗದಂತೆ ಮನುಷ್ಯ ಮಾಡಿಕೊಳ್ಳಬಹುದಾದ ವಿಮೆಯೆಂದರೆ ಈಜು ಕಲಿಯುವುದೊಂದೇ. ಅನೇಕ ವೈದ್ಯರು ನರದೌರ್ಬಲ್ಯಕ್ಕೆ ತಣ್ಣೀರಿನ ಉಪಚಾರವನ್ನು ವಿಧಿಸುತ್ತಾರೆ. ಬೇರೆ ಯಾವುದೇ ಕ್ರೀಡೆಗಿಂತ ಮಿಗಿಲಾಗಿ ಈಜುವುದರಲ್ಲಿ ದೇಹದ ಎಲ್ಲ ಮಾಂಸಖಂಡಗಳೂ ಹಗುರಗೊಳ್ಳುತ್ತವೆ. ಹಾಗೆ ಲಘುವಾದ ಮಾಂಸಖಂಡಗಳನ್ನು ಶುಚಿಗೊಳಿಸಿಕೊಂಡು ಅವಕ್ಕೆ ಹೊಸ ಆಹಾರವನ್ನು ಸಮರ್ಪಕವಾಗಿ ಒದಗಿಸಬಹುದು. ಆಗ ಆ ಮಾಂಸಖಂಡಗಳೊಂದಿಗೆ ದಟ್ಟವಾಗಿ ಹೆಣೆದುಕೊಂಡಿರುವ ನರಗಳೂ ಉತ್ತಮ ವಿಶ್ರಾಂತಿಯನ್ನು ಪಡೆಯುತ್ತವೆ. ಈಜುವುದು ಕ್ಷೇತ್ರಿಯವಾಗಿದೆ. ಅದರಿಂದ ಇಡೀ ದೇಹವನ್ನೇ ನೀರಿನ ಒತ್ತಡದಿಂದ ಉಜ್ಜಿದಂತಾಗಿ ರಕ್ತಪರಿಚಲನೆ ಉತ್ತಮಗೊಳ್ಳುವುದು. ಹಾಗೆಯೇ ಹೃದಯದ ಬಳಲಿಕೆಯನ್ನೂ ಪಾದಗಳಿಗೆ ಬೀಳುವ ಭಾರವನ್ನೂ ಇಳಿಸಿದಂತಾಗುವುದು. ಮಾಂಸಖಂಡ, ಮೂಳೆಗಳಿಗೆ ಸಂಬಂಧಿಸಿದ ಎಷ್ಟೋ ದೋಷಗಳು ನಿವಾರಣೆ ಹೊಂದುವುವು. ಪೋಲಿಯೋ ಅಥವಾ ಶಿಶುಗಳ ಪಾಶ್ರ್ವವಾಯು ವ್ಯಾಧಿಯ ಅನಂತರದ ಪರಿಣಾಮಗಳ ನಿವಾರಣೆಯಲ್ಲಿ ಈಜುವಿಕೆಯ ವೈದ್ಯಕೀಯ ಮೌಲ್ಯವನ್ನು ರೂಸ್óವೆಲ್ಟ್ ಅವರೇ ನಾಟಕೀಕರಿಸಿದ್ದರು. ಬೆಂಜಮಿನ್ ಫ್ರಾಂಕ್ಲಿನ್ ಅತ್ಯುತ್ತಮ ಈಜುಗಾರನಾಗಿದ್ದುದಲ್ಲದೆ ಈಜನ್ನು ಒಂದು ಕ್ರೀಡೆ ಮತ್ತು ಮನರಂಜನೆಯಾಗಿ ಸಮರ್ಥಿಸಿದವರಲ್ಲಿ ಮೊದಲಿಗ. ಪೂರ್ವಾಶ್ರಮದಲ್ಲಿ ವೈದ್ಯರಾಗಿದ್ದ ಹೃಷೀಕೇಶದ ಸ್ವಾಮಿ ಶಿವಾನಂದರು ಈಜುವುದು ಅತ್ಯುತ್ತಮ ವ್ಯಾಯಾಮ ಎಂದು ಹೇಳುತ್ತಾರೆ. ಅದು ದೇಹದ ಎಲ್ಲ ಮಾಂಸಖಂಡಗಳನ್ನೂ ಎಳೆಯುತ್ತದೆ. ಸೊಂಟದ ವಾತರೋಗವನ್ನು ಶಮನಗೊಳಿಸುತ್ತದೆ. ತೇಲುತ್ತಲೆ ಪ್ರಾಣಾಯಾಮವನ್ನೂ ಆಚರಿಸಬಹುದು ಎಂದು ಅವರ ಮತ. ಒಂದು ಅಮೆರಿಕನ್ ವಿಶ್ವವಿದ್ಯಾನಿಲಯ ಹದಿಮೂರು ಹದಿನಾಲ್ಕು ವರ್ಷ ವಯಸ್ಸಿನ ಹುಡುಗರು ಮತ್ತು ಹುಡುಗಿಯರನ್ನು ಆರಿಸಿ ನಡೆಸಿದ ಒಂದು ಅಧ್ಯಯನದಲ್ಲಿ ಈಜುಗಾರರಾಗಿದ್ದವರು ಪಾಠ ಪ್ರವಚನಗಳಲ್ಲಿ ಮೇಲುಗೈ ಆಗಿದ್ದು ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದುದು ಕಂಡು ಬಂತು. ಅವರು ಜೀವನದ ಬಗೆಗೆ ಸಹಜವೂ ಆರೋಗ್ಯಕರವೂ ಆದ ಪ್ರವೃತ್ತಿಯನ್ನು ತೋರಿಸುತ್ತಿದ್ದರು. ಅವರ ದೇಹ ದೃಢವಾಗಿತ್ತು. ಮುಖದಲ್ಲಿ ಆರೋಗ್ಯದ ಕಳೆಯಿತ್ತು. ಸರಾಸರಿ ನೋಡಿದ್ದರಲ್ಲಿ ಈಜುಬಾರದವರಿಗಿಂತಲೂ ಎತ್ತರವೂ ಬಲಿಷ್ಠವೂ ಆದ ದೇಹ ಅವರದಾಗಿತ್ತು. ಅವರ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಿದ್ದುದರಿಂದ ಅವರ ಶ್ವಾಸಕೋಶಗಳ ಶಕ್ತಿ ಸಾಮಾನ್ಯ ಯುವಕರದಕ್ಕಿಂತ ಹೆಚ್ಚಿನದಾಗಿತ್ತು. ಉಳಿದ ಆಟಗಾರರಿಗಿಂತ ವಿಶ್ರಾಂತಿ ಕಾಲದ ನಾಡಿಮಿಡಿತದ ಗತಿ ಕಡಿಮೆಯಾಗಿದ್ದುದಲ್ಲದೆ ರಕ್ತದ ಒತ್ತಡದ ಪ್ರಮಾಣ ಸಾಮಾನ್ಯ ಸ್ಥಿತಿಗಿಂತ ಕಡಿಮೆಯಾಗಿತ್ತು. ಎದೆಯ ಎಕ್ಸ್-ರೇ ಚಿತ್ರ ಯಾವುದೇ ಬಗೆಯ ಹೃದಯದ ವಿಸ್ತರಣ ಅಥವಾ ಅಸಾಮಾನ್ಯ ಸ್ಥಿತಿಯನ್ನು ತೋರಲಿಲ್ಲ.

	ಈಜುವಿಕೆಯಿಂದ ಜೀರ್ಣಕ್ರಮ, ಉಸಿರಾಟ, ರಕ್ತಪರಿಚಲನೆ, ಎಲ್ಲ ಮಾಂಸಖಂಡಗಳ ಸಹಕಾರಯುತ ವರ್ತನೆ, ದೇಹದ ಮಿತಪ್ರಮಾಣ ಬೆಳವಣಿಗೆ, ಒಂದು ಗಂಭೀರ ನಿಲವು ಮತ್ತು ಶಕ್ತಿಯ ಗಳಿಕೆ, ಉತ್ತಮ ವ್ಯಕ್ತಿತ್ವ, ಹೆಚ್ಚಿದ ಸಹಿಷ್ಣುತೆ, ಉತ್ತಮ ಆರೋಗ್ಯ-ಇವಿಷ್ಟನ್ನೂ ಸಾಧಿಸಬಹುದು.						
(ಯು.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ